ಪ್ರಬುದ್ಧ ಕರ್ಣಾಟಕ - ಎ.ಆರ್.ಕೃಷ್ಣಶಾಸ್ತ್ರಿಗಳು ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿ ಇವರು ಪ್ರಬುದ್ಧ ಕರ್ನಾಟಕ (೧೯೧೯) ಮತ್ತು ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದ(೧೯೧೮)ರಲ್ಲಿ ಸ್ಥಾಪಿಸಿದರು. 	ಕನ್ನಡ ಭಾಷೆ ಸಾಹಿತ್ಯಗಳಿಗೆ ಮೀಸಲಾಗಿರುವ ಸುಸಂಸ್ಕøತ ಅಭಿರುಚಿಯ ಓದುಗರಿಗೆ ಪ್ರಿಯವಾಗಿರುವ ಹೆಸರಾಂತ ಕನ್ನಡ ತ್ರೈಮಾಸಿಕ ಪತ್ರಿಕೆ. ಸಂಶೋಧನಾತ್ಮಕ ಮತ್ತು ಸೃಜನಾತ್ಮಕ ವಿಷಯಗಳಿಗೆ ಹೆಸರಾಗಿರುವ ಈ ಪತ್ರಿಕೆಯನ್ನು ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸುತ್ತಿದೆ. ಬೆಂಗಳೂರು ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದ ಆಶ್ರಯದಲ್ಲಿ, ಅದರ ಅಂಗವಾಗಿ ಹೊರತರಲಾಯಿತು. ಇದರ ಸಂಸ್ಥಾಪಕರು, ಆಗ್ಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಎ.ಆರ್. ಕೃಷ್ಣಶಾಸ್ತ್ರಿಗಳು. ಇವರೇ ಮೊದಲ ಸಂಪಾದಕರು ಕೂಡ. ಇವರಿಗೆ ಅಂದಿನ ಶ್ರೀರಾಮಕೃಷ್ಣಾಶ್ರಮದ ಸ್ವಾಮಿಗಳಾದ ವಿದೇಹಾನಂದರು ಧಾರ್ಮಿಕ ವಿಚಾರಗಳನ್ನು ಕನ್ನಡ ಜನರಿಗೆ ತಿಳಿಸಲು ಇಂಗ್ಲಿಷ್ ಭಾಷೆಯಲ್ಲಿ ಬರುತ್ತಿದ್ದ ಪ್ರಬುದ್ಧ ಭಾರತ ಪತ್ರಿಕೆಯ ಮಾದರಿಯಲ್ಲಿ ಪ್ರಬುದ್ಧ ಕರ್ಣಾಟಕವೆಂಬ ಕನ್ನಡ ಪತ್ರಿಕೆಯನ್ನು ಹೊರಡಿಸಬಹುದೆಂದು ಸ್ವಲ್ಪಕಾಲದ ಮೊದಲು ಸಲಹೆ ಮಾಡಿದ್ದರು. ಅದೇ ಹೆಸರನ್ನು ಶಾಸ್ತ್ರಿಗಳು ತಾವು ಹೊರಡಿಸಿದ ಸಾಹಿತ್ಯ ಪತ್ರಿಕೆಗೆ ಬಳಸಿದರು. ಇಂದಿಗೂ ಅದೇ ಹೆಸರಿನಲ್ಲಿಯೇ ಪತ್ರಿಕೆ ನಡೆಯುತ್ತಿದೆ.

	ಪ್ರಬುದ್ಧ ಕರ್ಣಾಟಕದ ಪ್ರಥಮ ಸಂಚಿಕೆ ಪ್ರಕಟವಾದುದು 1919ರಲ್ಲಿ ಸಿದ್ಧಾರ್ಥಿ ಸಂವತ್ಸರದ ಯುಗಾದಿ ಸಂಚಿಕೆಯಾಗಿ. ಈ ಸಂಚಿಕೆಯಲ್ಲಿ ಪತ್ರಿಕೆಯನ್ನು ಕುರಿತ ಸಂಪಾದಕರ ಲೇಖನ, ಎನ್. ನೀಲಕಂಠಪ್ಪ, ಎಸ್.ವಿ. ರಂಗಣ್ಣ, ಸಿ.ಕೆ. ವೆಂಕಟರಾಮಯ್ಯ ಇವರ ಲೇಖನಗಳು, ಪುಸ್ತಕ ವಿಮರ್ಶೆ ಮತ್ತು ವಸ್ತುಕೋಶ ಇವು ಪ್ರಕಟಗೊಂಡಿವೆ. ಮೊದಲು ವರ್ಷಕ್ಕೆ ಮೂರು ಸಂಚಿಕೆಗಳಂತೆ ಪ್ರಕಟವಾಗುತ್ತಿದ್ದುದು, ಮಾರನೆಯ ವರ್ಷದಿಂದ ನಾಲ್ಕು ಸಂಚಿಕೆಗಳಾಗಿ ವಿನಾಯಕನ ಹಬ್ಬ, ದೀಪಾವಳಿ, ಸಂಕ್ರಾಂತಿ ಮತ್ತು ಕಾಮನಹಬ್ಬಗಳಲ್ಲಿ ಕ್ರಮವಾಗಿ ಪ್ರಕಟವಾಗತೊಡಗಿತು. ಈಗ ಚೈತ್ರ, ಆಷಾಢ, ಆಶ್ವಯುಜ ಮತ್ತು ಪುಷ್ಯ ಸಂಚಿಕೆಗಳಾಗಿ ಪ್ರಕಟವಾಗುತ್ತಿದೆ. ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಆಶ್ರಯದಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆ, 1932ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಬಂದಮೇಲೆ ಅದು ಇಲ್ಲಿಯ ಕನ್ನಡ ಗ್ರಂಥ ಪ್ರಕಾಶನ ಸಮಿತಿಯ (ಈಗ ಪ್ರಸಾರಾಂಗ) ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯದ ನೇರ ಆಡಳಿತಕ್ಕೆ ಪತ್ರಿಕೆ ಒಳಪಟ್ಟಾಗ ಬಿ.ಎಂ. ಶ್ರೀಕಂಠಯ್ಯನವರು ಮುಖ್ಯ ಸಂಪಾದಕರಾಗಿಯೂ ಟಿ.ಎಸ್. ವೆಂಕಣ್ಣಯ್ಯ, ಮತ್ತು ಎ.ಆರ್. ಕೃಷ್ಣಶಾಸ್ತ್ರಿ ಇವರುಗಳೂ ಸಂಪಾದಕರಾಗಿಯೂ ತೀ. ನಂ. ಶ್ರೀಕಂಠಯ್ಯ, ಕೆ.ವಿ. ಪುಟ್ಟಪ್ಪ ಮತ್ತು ವಿ. ಸೀತಾರಾಮಯ್ಯ ಇವರು ಸಂಪಾದಕ ಸಮಿತಿ ಸದಸ್ಯರಾಗಿಯೂ ಇದ್ದರು. ಈ ರೀತಿಯ ವ್ಯವಸ್ಥೆಯಲ್ಲಿಯೇ ಈಗಲೂ ಪತ್ರಿಕೆ ಮುಂದುವರಿಯುತ್ತಿದೆ.

	ಅಂದಂದಿನ ಸಂಪಾದಕ ಸಮಿತಿಯ, ಸಂಪಾದಕರು. ಲೇಖಕರ ಮತ್ತು ಓದುಗರ ಪರಿಶ್ರಮ ಪ್ರೋತ್ಸಾಹಗಳಿಂದ ಈ ಪತ್ರಿಕೆ ಕಾಲಕಾಲಕ್ಕೆ ಬೆಳೆದು ಬಲಗೊಳ್ಳುತ್ತ ನಡೆದಿದೆ. ಕವಿತೆ, ಕಥೆ, ನಾಟಕ, ಪ್ರಬಂಧ, ವಿಮರ್ಶೆ, ಸಂಪಾದನೆ, ಸಂಶೋಧನೆ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಬರೆಹಗಳನ್ನು ಒಳಗೊಂಡು ಪತ್ರಿಕೆಯ ಗಾತ್ರವೂ ಗುಣವೂ ಬೆಳೆದಿದೆ. ಆಗಾಗ ವಿಶೇಷ ಲೇಖನಗಳು ಪುರವಣಿಗಳೂ ಸಂಚಿಕೆಗಳೂ ಪ್ರಕಟವಾಗಿವೆ. ಬೆಳ್ಳಿಯ ಹಬ್ಬದ ನೆನಪಿನ ಸಂಚಿಕೆ (1945), ಚಿನ್ನದ ಹಬ್ಬದ ನೆನಪಿನ ಸಂಚಿಕೆ (1969), ಮೆಂಡಲ್ ವಿಶೇಷಾಂಕ (1965) ಮುಂತಾದವು ಅಂಥ ವಿಶೇಷ ಸಂಚಿಕೆಗಳಲ್ಲಿ ಕೆಲವು ಕೀಲಕ ಸಂವತ್ಸರದ ತ್ರಸಂಚಿಕೆ (50-1; 1968), ಸ್ಥಾಪಕರಾದ ಎ.ಆರ್. ಕೃಷ್ಣಶಾಸ್ತ್ರಿಗಳ ನೆನಪಿನ ಸಂಚಿಕೆಯಾಗಿ ಸಿದ್ಧವಾಗಿ, ಅವರಿಗೆ ಗೌರವಪೂರ್ವಕವಾಗಿ ಅರ್ಪಿತವಾಗಿದೆ.

	ಮೊದಮೊದಲು ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳಿಗೆ ಸಂಬಂಧಪಟ್ಟ ಲೇಖನಗಳು ಸಾಹಿತ್ಯ ಲೇಖನಗಳ ಜೊತೆಜೊತೆಗೇ ಅಚ್ಚಾಗುತ್ತಿದ್ದುವು. ಬಳಿಕ ವಿಜ್ಞಾನ ಮತ್ತು ಮಾನವಿಕ ವಿಷಯಗಳನ್ನು ಕನ್ನಡದಲ್ಲಿ ಬೋಧಿಸುವುದೂ ಕಲಿಯುವುದೂ ಹೆಚ್ಚಾದಂತೆ, ಮುಖ್ಯವಾಗಿ ವಿಜ್ಞಾನ ವಿಭಾಗದ ಪ್ರತ್ಯೇಕ ಸಂಚಿಕೆಗಳೇ ಹೆಚ್ಚು-ಸಂಚಿಕೆಗಳಾಗಿ ಕ್ರಮವಾಗಿ ಪ್ರಕಟವಾಗುವುದು ಆರಂಭವಾಯಿತು. ಈಚೆಗೆ ಆಯಾ ವಿಭಾಗಗಳಿಗೆ ಮೀಸಲಾದ ವಿಜ್ಞಾನ ಕರ್ಣಾಟಕ, ಮಾನವಿಕ ಕರ್ಣಾಟಕಗಳೆಂಬ ಪ್ರತ್ಯೇಕ ಪತ್ರಿಕೆಗಳನ್ನೇ ಮೈಸೂರು ವಿಶ್ವವಿದ್ಯಾನಿಲಯ ಹೊರತರುತ್ತಿದೆ. ಇದರಿಂದಾಗಿ ಭಾಷೆ ಸಾಹಿತ್ಯಗಳ ವಿಷಯಗಳಿಗೆ ಪ್ರಬುದ್ಧ ಕರ್ನಾಟಕ ಮೀಸಲಾಗಿದೆ. ಪತ್ರಿಕೆಯ ಹೊರಮೈ ನೋಟದಲ್ಲಿಯೂ ಸಣ್ಣಪುಟ್ಟ ಮಾರ್ಪಾಡುಗಳಾಗಿವೆ. ಈಗ ಪತ್ರಿಕೆ ಲೇಖನಗಳ ಜೊತೆಗೆ, ಕಾವ್ಯವಿತಾನ, ಕಮ್ಮಟದ ಕಿಡಿಗಳು, ಕಾವ್ಯಾವಲೋಕನ, ಸಂಪಾದಕೀಯ, ಸಾದರಸ್ವೀಕಾರ ಈ ಸ್ಥಿರಶೀರ್ಷಿಕೆಗಳನ್ನು ಒಳಗೊಂಡಿರುತ್ತದೆ. ಈ ಮೊದಲು ಬೆಂಗಳೂರು ಪ್ರೆಸ್, ಮೈಸೂರಿನ ಕ್ರೌನ್ ಪ್ರೆಸ್ ಮತ್ತು ವೆಸ್ಲಿ ಪ್ರೆಸ್‍ಗಳಲ್ಲಿ ಅಚ್ಚುಗೊಂಡು ಹೊರಬರುತ್ತಿದ್ದ ಪತ್ರಿಕೆ ಈಚಿನ ವರ್ಷಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮುದ್ರಣಾಲಯದಲ್ಲಿ ಮುದ್ರಣಗೊಂಡು ಅಚ್ಚಾಗುತ್ತಿದೆ.

	ಮೊದಲಿನಿಂದಲೂ ಖ್ಯಾತ ವಿದ್ವಾಂಸರು ಕವಿಗಳು ವಿಮರ್ಶಕರು ನಾಟಕಕಾರರು ಕಥೆಗಾರರು ಬರೆದ ಬರೆಹಗಳು ಈ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತ ಬಂದಿವೆ. ಇಂಥ ಬರೆಹಗಳಿಂದ ಕನ್ನಡ ಭಾಷೆಯ ಕನ್ನಡ ಸಾಹಿತ್ಯ ಸಂಸ್ಕøತಿಗಳ ಶ್ರೀಮಂತಿಕೆ ಮಿಗಿಲಾಗಿ ಬೆಳೆದಿದೆ. ಲೇಖಕರು ತಮ್ಮ ಶಕ್ತಿಸಾಮಥ್ರ್ಯಗಳನ್ನು ಇಲ್ಲಿ ಒರೆಗೆ ಹಚ್ಚಿದ್ದಾರೆ, ಅದರ ಪ್ರತಿಫಲವಾಗಿ ತಾವೇ ಬೆಳೆದು ದೊಡ್ಡವರಾಗಿದ್ದಾರೆ. ಈ ಪತ್ರಿಕೆಯ ಲೇಖಕರ ಬಳಗ ದೊಡ್ಡದು; ತುಂಬ ಗಣ್ಯವಾದ್ದು. ಇದರಲ್ಲಿ ಆರ್. ನರಸಿಂಹಾಚಾರ್, ಬಿ.ಎಂ.ಶ್ರೀಕಂಠಯ್ಯ, ಪಂಜೆ ಮಂಗೇಶರಾವ್, ಎ. ವೆಂಕಟಸುಬ್ಬಯ್ಯ, ಡಿ.ವಿ. ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಟಿ.ಎಸ್. ವೆಂಕಣ್ಣಯ್ಯ, ಎ.ಆರ್, ಕೃಷ್ಣಶಾಸ್ತ್ರಿ, ಕುವೆಂಪು, ದ.ರಾ. ಬೇಂದ್ರೆ ವಿ.ಸೀತಾರಾಮಯ್ಯ, ಸಂಸ, ಎಂ. ಆರ್. ಶ್ರೀನಿವಾಸಮೂರ್ತಿ, ಜಿ. ಹನುಮಂತರಾವ್, ನಾ, ಕಸ್ತೂರಿ ಎ. ಎನ್. ಮೂರ್ತಿರಾವ್, ಜಿ. ಪಿ. ರಾಜರತ್ನಂ, ರಾಳಪಲ್ಲಿ ಅನಂತಕೃಷ್ಣಶರ್ಮ, ಆನಂದ, ಎಂ. ಎಚ್. ಕೃಷ್ಣ, ಗೋವಿಂದ ಪೈ, ಎಲ್. ಗುಂಡಪ್ಪ, ಎಂ. ಗೋಪಾಲಕೃಷ್ಣ ಅಡಿಗ, ಶ್ರೀರಂಗ, ಶಂ. ಬಾ. ಜೋಶಿ, ಎಸ್. ಎಸ್. ನಂದೀಮಠ, ಪು. ತಿ. ನರಸಿಂಹಾಚಾರ್, ಕೆ. ಎಸ್. ನರಸಿಂಹಸ್ವಾಮಿ, ಎ. ಎನ್. ನರಸಿಂಹಯ್ಯ, ಡಿ. ಎಲ್. ನರಸಿಂಹಾಚಾರ್, ತೀ. ನಂ. ಶ್ರೀಕಂಠಯ್ಯ, ಪಾಂಡುರಂಗರಾವ ದೇಸಾಯಿ, ಮ.ಪ್ರ. ಪೂಜಾರ, ಎಂ. ಮರಿಯಪ್ಪ ಭಟ್ಟ, ರಂ. ಶ್ರೀ. ಮುಗಳೀ, ಎಸ್. ವಿ. ರಂಗಣ್ಣ, ಎಂ. ಯಾಮುನಾಚಾರ್ಯ, ಕೆ. ಎ. ರಾಘವಾಚಾರ್, ಎಂ. ಅನಂತರಂಗಾಚಾರ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಮ. ಅ. ರಾಮಾನುಜ ಅಯ್ಯಂಗಾರ್, ಬೆನಗಲ್ ರಾಮರಾವ್, ಎನ್, ಲಕ್ಷ್ಮಿನಾರಯಣರಾವ್, ಎಸ್. ಪಂಚಮುಖಿ, ಬಿ. ವೆಂಕೋಬರಾವ್, ಎಸ್. ಶ್ರೀಕಂಠಶಾಸ್ತ್ರಿ, ಎಸ್. ಜಿ. ಶಾಸ್ತ್ರಿ, ಕಡೆಂಗೋಡ್ಲು ಶಂಕರಭಟ್ಟ, ದೇ. ಜವರೇಗೌಡ, ಕೆ. ಕೃಷ್ಣಮೂರ್ತಿ, ಆರ್. ಎಲ್. ನರಸಿಂಹಯ್ಯ, ಸಿ.ಕೆ. ವೆಂಕಟರಾಮಯ್ಯ ಮೊದಲಾದವರು ಸೇರಿದ್ದಾರೆ.

	ಪ್ರಬುದ್ಧ ಕರ್ಣಾಟಕದಲ್ಲಿಯ ಬಿಡಿಬರೆಹಗಳೂ ಲೇಖನಮಾಲೆಗಳೂ ಅನಂತರ ಗ್ರಂಥ ರೂಪದಲ್ಲಿ ಹೊರಬಂದಿವೆ. ಪ್ರಾಚೀನ ಸಾಹಿತ್ಯ, ಕೆಲವು ಕನ್ನಡ ಕವಿಗಳ ಜೀವನಕಾಲ ವಿಚಾರ, ವಿಗಡ ವಿಕ್ರಮರಾಯ, ವಿದ್ಯಾರಣ್ಯರ ಸಮಕಾಲೀನರು, ಗದಾಯುದ್ಧ ನಾಟಕ, ಭಕ್ತಿಭಂಡಾರಿ ಬಸವಣ್ಣನವರು, ಮೈಸೂರು ದೇಶದ ವಾಸ್ತುಶಿಲ್ಪ, ಸುಬ್ಬಣ್ಣ, ಪಂಪಾಯಾತ್ರೆ, ಅಶ್ವತ್ಥಾಮನ್, ಅಂತಿಗೊನೆ, ಮಲೆನಾಡಿನ ಚಿತ್ರಗಳು, ನಂಬಿಯಣ್ಣನ ರಗಳೆ, ಮೈಸೂರು ಮಲ್ಲಿಗೆ, ಅಹಲ್ಯೆ, ಹಗಲುಗನಸುಗಳು, ಭಾಸಕವಿ, ಜಗತ್ತುಗಳ ಹುಟ್ಟುಸಾವು, ಆನಂದವರ್ಧನನ ಕಾವ್ಯಮೀಮಾಂಸೆ-ಈ ಮುಂತಾದವು ಹಾಗೆ ಪ್ರಕಟವಾದ ಗ್ರಂಥಗಳಲ್ಲಿ ಕೆಲವು.

	ಒಳ್ಳೆಯ ಪರಂಪರೆಯನ್ನುಳ್ಳ ಪ್ರಬುದ್ಧ ಕರ್ಣಾಟಕ ಕನ್ನಡದ ಚಿರಕಾಲಿಕ ಪತ್ರಿಕೆಗಳಲ್ಲಿ ಅಗ್ರಗಣ್ಯವಾದ್ದು; ಆದರ್ಶಪ್ರಾಯವಾದ್ದು.
(ಟಿ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ